Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಮಾರ್ಚ್ 8, 2015
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು
ಹಿಡಿದು ಹೂಮಾಲೆಯ ಕೈಯಲ್ಲಿ ಅವಳು
ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ
ಕೃಷ್ಣನ ಮಾನಸ ಸೋದರಿ, ಪಾಂಚಾಲ ರಾಜನ ಕುವರಿ

ಯಾವ ಕ್ಷತ್ರಿಯನಿಂದಲೂ ಭೇದಿಸಲಸಾಧ್ಯವಾದಾಗ
ಗುಂಪಿನಿಂದೆದ್ದು ಬಂದನೊಬ್ಬ ವಿಪ್ರಕುವರ
ಕಟ್ಟುಮಸ್ತಾದ ದೇಹ, ಬ್ರಾಹ್ಮಣನಂತಿಲ್ಲ
ಅದೋ ಭೇದಿಸಿಯೇ ಬಿಟ್ಟ, ಹಾಕಲೇಬೇಕು ಕೊರಳಿಗೆ ಹೂಮಾಲೆ
ಗೊತ್ತಾಯಿತು ಅನಂತರ, ಭೇದಿಸಿದವನು ಬೇರಾರೂ ಅಲ್ಲ,
ಮನ್ಮಥರೂಪಿ, ಮಹಾನ್ ಧನುರ್ಧರ ಪಾರ್ಥ
ಅಣ್ಣತಮ್ಮಂದಿರೊಡಗೂಡಿ ನನ್ನನ್ನು ಕರೆದೊಯ್ದ
ತಾಯಿ ಬೇಯಿಸುತ್ತಿದ್ದ ಗುಡಿಸಲಿಗೆ, ಪಾಂಡುಪುತ್ರರಿಗೆಂತ ಗತಿ!
ಅಮ್ಮಾ ನೋಡಿಲ್ಲಿ, ಏನೋ ತಂದಿದ್ದೇನೆ, ಗೆದ್ದು ಬಂದಿದ್ದೇನೆ
ತಿರುಗಿ ನೋಡದೇ ಹೇಳಿ ಬಿಟ್ಟಳು ಕುಂತಿ
ಐವರೂ ಸಮನಾಗಿ ಹಂಚಿಕೊಳ್ಳಿ ಮಕ್ಕಳೇ
ಎಂತಹ ವಿಪರ್ಯಾಸ, ಹೆಣ್ಣಿಗೆ ಹೆಣ್ಣೇ ಶತ್ರು!
ಹಲವು ಗಂಡುಗಳ ಏಕಕಾಲಕ್ಕೆ ವರಿಸುವವಳು ಜಾರಿಣಿ
ಎಂದು ಹೇಳಿತ್ತು ಧರ್ಮಗೃಂಥ ಸಾಮಾನ್ಯರಿಗೆ
ಶಕ್ತಿವಂತನಿಗೆ ಕಾನೂನು ಬದಲಾಯಿಸುವುದು ಕಷ್ಟವೇ?
ಮಹಾನ್ ಪತಿವೃತೆಯಾದ ನಾನು ಐವರು ಗಂಡರ ಮಡದಿ!
ಸಮಾಜ ಅದರ ಬಗ್ಗೆನೂ ತಲೆ ಕೆಡಿಸಿಕೊಳ್ಳಲಿಲ್ಲ
ಸ್ತ್ರೀ ಸ್ವಾತಂತ್ರ್ಯ ನನ್ನ ಕಾಲದಲ್ಲಂತೂ ಇರಲಿಲ್ಲ
ಅದನ್ನು ಸರಿಯಾಗಿ ಬಳಸಿಕೊಂಡವನು ಮಾತ್ರ ಧರ್ಮ
ಜೂಜಿನಲ್ಲಿ ಪಣಕ್ಕಿಟ್ಟ, ಮತ್ತು ಹೆಸರಿಟ್ಟ ರಾಜಧರ್ಮ!
ಪಣಕ್ಕಿಟ್ಟವನು ಸೋತೂಬಿಟ್ಟ!, ಮಟದಿಯನ್ನೇ ಜೂಜಿಗಿಡುವಷ್ಟು
ನೈತಿಕ ಅಧಃಪತನಕ್ಕಿವಯಾಕೆ ಇಳಿದ?
ರಾಜ್ಯಲಕ್ಷ್ಮಿ, ಅಧಿಕಾರಲಕ್ಷ್ಮಿ ತಲೆಗೇರಿರಬೇಕು
ನನ್ನನೊಂದು ಮಾತು ಕೇಳುವ ಔದಾರ್ಯವಿಲ್ಲದವನಾದ
ಅಂತಃಪುರದಲ್ಲಿದ್ದವಳಿಗೆ ಕರೆಬಂತು ಭಟರಿಂದ
ಮಾಜಿ ಮಹಾರಾಣಿ ಬರಬೇಕಂತೆ ಆಸ್ಥಾನಕ್ಕೆ
ಅಶುಭ ಸೂಚನೆಯಾಗಲೇ ದೊರಕಿತ್ತು ನನಗೆ
ಹೆಣ್ಣಿಗೆ ಪ್ರಾಣಕ್ಕಿಂತ ಮಾನ ಹೆಚ್ಚು
ಗೆದ್ದ ದರ್ಪದಲ್ಲಿ ಮುಡಿಹಿಡಿದು ದರದರನೆ
ಪಶುವಂತೆ ಎಳೆದೊಯ್ದ ದುಶ್ಯಾಸನ
ಹರಕೆಗೆ ಬಲಿಯಾಗುವ ಮುಗ್ಧಕುರಿಯಂತೆ ನಾನು
ಸಹಾಯಹಸ್ತಕ್ಕಾಗಿ ಎಲ್ಲ ಗಂಡುಜೀವಗಳನ್ನರಸಿದೆ
ನೀಚ ದುರ್ಯೋಧನನ ಬಾಯಿಂದ ಬಂದೇ ಬಿಟ್ಟಿತು ಆಜ್ಞೆ
ಅನುಜಾ ನಡೆಸು ವಸ್ತ್ರಾಪಹರಣ, ಮಾಡು ಮಾನಭಂಗ
ಭೀಷ್ಮ, ದ್ರೋಣ, ಧೃತರಾಷ್ಟ್ರ, ಐವರು ಗಂಡಂದಿರು
ಒಬ್ಬರೂ ಉಸಿರೆತ್ತುತ್ತಿಲ್ಲ, ಗಂಡಸರೇ ಇವರೆಲ್ಲರು?
ಕಾಡಿದೆ, ಬೇಡಿದೆ, ಸೆರಗು ಹಿಡಿದು ಅಂಗಲಾಚಿದೆ
ವಿದುರನೋರ್ವ ಮುಂದೆ ಬಂದ, ನಿಸ್ಸಹಾಯಕನಾಗಿ ನಡೆದ
ಯಾವ ಕಲ್ಲು ಹೃದಯವೂ ಕರಗಲಿಲ್ಲ
ಸಮಾಜ ಸತ್ತಿದೆ ಮತ್ತು ನನ್ನೆದುರು ಪ್ರೇತವಾಗಿ ನಿಂತಿದೆ
ತುಂಬಿದ ಸಭೆಯಲ್ಲಿ ಅಬಲೆಯ ಮೇಲೆ ದಬ್ಬಾಳಿಕೆ
ಅಧಿಕಾರವಿಲ್ಲದವನೊಬ್ಬ ಸೆರಗಿಡಿದು ಎಳೆಯುತ್ತಿದ್ದಾನೆ
ಜೀವಶಕ್ತಿಯೆಲ್ಲ ಪಣಕ್ಕಿಟ್ಟು ಪ್ರತಿರೋಧಿಸುತ್ತಿದ್ದೇನೆ
ಸಾಲುತ್ತಿಲ್ಲ, ಪರಮಾತ್ಮನೇ ನೀನೆ ಇನ್ನು ದಿಕ್ಕೆನಗೆ
ಎಲ್ಲ ಗಂಡಸರೂ ಷಂಡರಾದಾಗ, ರಕ್ಷಕನೇ ಸ್ವಯಂ ಪುರುಷ
ಹೆಣ್ಣಿನ ಮಾನದ ಘನತೆ ಅರಿತ ಹದಿನಾರು ಸಾವಿರ ಹೆಂಡಿರ ಗಂಡ
ಅವನೊಬ್ಬನಿಲ್ಲದಿದ್ದರೆ ನಡೆದೇ ಬಿಡುತ್ತಿತ್ತು ಹೀನಕೃತ್ಯ
ಮತ್ತದರ ಬಲಿಪಶುವಾಗಿ ನಿಂತಿರುತ್ತಿದ್ದೆ ನಾನು
ಮುಂದೊಂದು ದಿನ ನಾ ಸತ್ತಾಗ ಧರ್ಮ ಹೇಳಿದನಂತೆ
ಕುರುಕ್ಷೇತ್ರ ಯುದ್ಧಕ್ಕಿವಳೇ ಕಾರಣ - ದ್ರೌಪದಿ
ಯಾಕೋ ಇಬ್ಬರ ನಡುವೆ ವ್ಯತ್ಯಾಸವೇ ತಿಳಿಯುತ್ತಿಲ್ಲ
ಸೀರೆ ಸೆಳೆಯುವವನಿಗೂ ಮತ್ತು ನೋಡಿ ಸುಮ್ಮನಿರುವವನಿಗೂ
ಕಾಲ ಕಳೆಯುತ್ತಾ ಬದಲಾಗುತ್ತಾ ಬಂದಿದೆ
ನಾನೂ ಯಾವುದೋ ಹೆಣ್ಣು ಜೀವದ ಚೇತನವಾಗಿದ್ದೇನೆ
ದುಶ್ಯಾಸನ ಇಂದಿಗೂ ಸತ್ತಿಲ್ಲ, ಧರ್ಮ ಏಳಲು ತಯಾರಿಲ್ಲ
ಎಲ್ಲರೂ ಹೇಳುತ್ತಿದ್ದಾರೆ ಕುರುಕ್ಷೇತ್ರಕ್ಕೆ ದ್ರೌಪದಿಯೇ ಕಾರಣ!
-ಭಾರತೀಯ
ಪ್ರಸನ್ನ. ಆರ್. ಹೆಗಡೆ

1 ಕಾಮೆಂಟ್‌(ಗಳು):

Santosh ಹೇಳಿದರು...

Super