Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಮಾರ್ಚ್ 22, 2015


ವಿಶೇಷವೇನಿಲ್ಲ, ಎರಡೇ ಟೈಯರ್ರು
ಹಳೇ ಹರಕ್ಯುಲಸ್ ಮಾಡೆಲ್ಲು
ಕಾಲಕಾಲಕ್ಕೂ ಎಣ್ಣೆ ಬಿಟ್ಟು
ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು

ನೌಕರಿಗೆ ಸೇರಿದಾಗ ಮೊದಲ ಸಂಬಳದಲ್ಲಿ
ಕೊಂಡರಂತೆ ಅವರು ತನ್ನ ಕನಸಿನ ಸೈಕಲ್ಲು 
ಆ ಖುಷಿಯಿನ್ನು ಅವರ ಮನದಿಂದ ಮರೆಯಾಗಿಲ್ಲ
ಅದ ನೋಡಲು ನಾನಾಗ ಹುಟ್ಟಿರಲಿಲ್ಲ 

ಮದುವೆಯಾದ ನಂತರ ಅಮ್ಮನ ಮುಂದೆ ಕೂರಿಸಿಕೊಂಡು
ಮಾಡಿದರಂತೆ ಡಬಲ್ ರೈಡು, ಕೆಂಪಾಗುತ್ತಾರೆ ಹೇಳುವಾಗ ಇಬ್ಬರೂ
ಮತ್ತು ಅಮ್ಮ ತಣ್ಣಗೆ ಹೇಳುತ್ತಾಳೆ
"ಹ್ಞುಂ ಒಮ್ಮೆ ಬೀಳಿಸಿಯೂ ಹಾಕಿದ್ದರು!"

ಆಮೇಲೆ ನಾ ಹುಟ್ಟಿದ ನಂತರ
ಮುಂದಿನ ಜಾಗ ನನ್ನದಾಗಿ
ಅಮ್ಮನ ಹಿಂದೆ ಕೂರಿಸಿಕೊಂಡು
ಅಪ್ಪ ಓಡಿಸಿದರು ಸಂಸಾರದ ಸೈಕಲ್ಲು

ದೊಡ್ಡವನಾಗಿ ನನಗೂ ಸೈಕಲ್ ಹೊಡೆಯುವ ಹಂಬಲವಾಗಿ
ಅಮ್ಮನ ಕೈಯಿಂದ ಒತ್ತಡ ಹೇರಿಸಿ, ಅಪ್ಪನಿಗೆ ಕೇಳಿಸಿದಾಗ
ಖುಷಿಯಿಂದಲೇ ಕಲಿಸಿಕೊಟ್ಟರು, ಪೆಡಲ್ಲು ತುಳಿವಾಗ
ಕ್ಯಾರಿಯರ್ ಹಿಡಿದು ಹಿಂದೆ ಓಡಿದರು

ಮೊದಲು ತಳ್ಳಿಕೊಂಡು ಹೋಗು, ನಂತರ ಒಳ ಪೆಡಲ್ಲು
ಆನಂತರ ಹಾರೆಯ ಮೇಲೆ ಹತ್ತಿ ಓಡಿಸೆಂದರು
ಆಯ ತಪ್ಪಿ ಉದುರಿಬಿದ್ದಾಗ ಓಡಿ ಬಂದೆತ್ತಿದರು
"ಏನೂ ಆಗಿಲ್ಲ, ಧೈರ್ಯವಾಗಿರು ನಾನಿರುವೆ" ಎಂದರು

ಮುಳ್ಳು ಹಿಂಡು, ಕಲ್ಲು ಪಾಗಾರ
ತನ್ನ ಪಾಡಿಗೆ ತಾ ಮೇಯ್ದುಕೊಂಡಿದ್ದ ದನ
ರಸ್ತೆ ಬದಿಯ ಗಟಾರು ಹೀಗೆ ಎಲ್ಲದರ ಮೇಲೂ
ನಾ ಗುದ್ದಿದ ಸೈಕಲ್ಲಿನ ಟೈಯರಿನ ಗುರುತು

ಕಲಿತ ನಂತರ ಮರ್ಕಟ ಮನ ಸಾಹಸವ ಬಯಸಿ
ವಿಚಿತ್ರ ಚಟುವಟಿಕೆಗಳಲಿ ಹಾತೊರೆದು ತೊಡಗಿ
ಓಡಿಸತೊಡಗಿದೆನು ಕೈಬಿಟ್ಟುಕೊಂಡು, ಚಕ್ರ ಎತ್ತಿಕೊಂಡು
ಗೆಳೆಯರ ಕೂರಿಸಿಕೊಂಡು, ಅಬ್ಬಾ ಮಸ್ತಿಗೆ ಎಣೆಯಿಲ್ಲ

ಕಾಲ ಸವೆಯುತ್ತಾ ಬಂದಿತು, ನಾನೂ ಕಲಿತು 
ಉದ್ಯೋಗ ಹಿಡಿದು ದುಡಿಯುತ್ತದ್ದೇನೆ ಅಪ್ಪನಂತೆ
ಸಂಸ್ಥೆಯೇನೋ ಕಾರು ಕೊಟ್ಟಿದೆ ಓಡಾಡಲು
ಆದರೂ ಸೈಕಲ್ಲಿನ ಮಜವಿಲ್ಲ

ಊರಿಗೆ ಹೋದಾಗಲೆಲ್ಲ ನೋಡುತ್ತೇನೆ
ಶೆಡ್ಡಿನಲ್ಲಿ ಬಿದ್ದಿರುವ ಹಳೇ ಸೈಕಲ್ಲು
ನಾ ಗುದ್ದಿ ಗಾಯಗೊಳಿಸಿದ ಸೈಕಲ್ಲು
ಅಪ್ಪ ಅನುದಿನ ಏಳೆಂಟು ಕಿಲೋಮೀಟರ್ ಓಡಿಸಿದ ಸೈಕಲ್ಲು

ಅನ್ನಿಸುತ್ತದೆ ಆಗಾಗ, ಅಪ್ಪ ಎಂತ ಸಾಹಸಿ
ಅದಕ್ಕೇ ಇರಬೇಕು ಅರವತ್ತರಲ್ಲೂ ಅಷ್ಟು ಗಟ್ಟಿ
ಸೈಕಲ್ ಓಡಿಸಿದರೂ ಕುಂದುಕೊರತೆಯಿಲ್ಲದಂತೆ ಸಾಕಿದರು
ಯಾವುದಕ್ಕೂ ಹಿಂಜರಿಯದೇ ಧೈರ್ಯವಾಗಿ ಮುನ್ನಡೆದರು

ಯೋಚಿಸುತ್ತೇನೆ ಆಗಾಗ, ನಾನೂ ಆಗಬಹುದೇ ಅಪ್ಪನಂತೆ?
ಸೈಕಲ್ಲಿನಿಂದ ಬೀಳಲು ಅಪ್ಪನಿಗೆ ಅಂಜಿಕೆಯೇನಿರಲಿಲ್ಲ
ಓಡುವ ಕಾರಿನಿಂದ ಹಾರಲು ನಾ ತಯಾರಿಲ್ಲ
ಅಪ್ಪ ಈಗಲೂ ಹೇಳುತ್ತಾರೆ "ನಾನಿದ್ದೇನೆ ಧೈರ್ಯವಾಗಿರು!"
  
- ಭಾರತೀಯ
ಪ್ರಸನ್ನ.ಆರ್.ಹೆಗಡೆ 

0 ಕಾಮೆಂಟ್‌(ಗಳು):