Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಮಾರ್ಚ್ 22, 2015


ವಿಶೇಷವೇನಿಲ್ಲ, ಎರಡೇ ಟೈಯರ್ರು
ಹಳೇ ಹರಕ್ಯುಲಸ್ ಮಾಡೆಲ್ಲು
ಕಾಲಕಾಲಕ್ಕೂ ಎಣ್ಣೆ ಬಿಟ್ಟು
ಈಗಲೂ ಚೆನ್ನಾಗಿದೆ ಅಪ್ಪಯ್ಯನ ಸೈಕಲ್ಲು

ನೌಕರಿಗೆ ಸೇರಿದಾಗ ಮೊದಲ ಸಂಬಳದಲ್ಲಿ
ಕೊಂಡರಂತೆ ಅವರು ತನ್ನ ಕನಸಿನ ಸೈಕಲ್ಲು 
ಆ ಖುಷಿಯಿನ್ನು ಅವರ ಮನದಿಂದ ಮರೆಯಾಗಿಲ್ಲ
ಅದ ನೋಡಲು ನಾನಾಗ ಹುಟ್ಟಿರಲಿಲ್ಲ 

ಮದುವೆಯಾದ ನಂತರ ಅಮ್ಮನ ಮುಂದೆ ಕೂರಿಸಿಕೊಂಡು
ಮಾಡಿದರಂತೆ ಡಬಲ್ ರೈಡು, ಕೆಂಪಾಗುತ್ತಾರೆ ಹೇಳುವಾಗ ಇಬ್ಬರೂ
ಮತ್ತು ಅಮ್ಮ ತಣ್ಣಗೆ ಹೇಳುತ್ತಾಳೆ
"ಹ್ಞುಂ ಒಮ್ಮೆ ಬೀಳಿಸಿಯೂ ಹಾಕಿದ್ದರು!"

ಆಮೇಲೆ ನಾ ಹುಟ್ಟಿದ ನಂತರ
ಮುಂದಿನ ಜಾಗ ನನ್ನದಾಗಿ
ಅಮ್ಮನ ಹಿಂದೆ ಕೂರಿಸಿಕೊಂಡು
ಅಪ್ಪ ಓಡಿಸಿದರು ಸಂಸಾರದ ಸೈಕಲ್ಲು

ದೊಡ್ಡವನಾಗಿ ನನಗೂ ಸೈಕಲ್ ಹೊಡೆಯುವ ಹಂಬಲವಾಗಿ
ಅಮ್ಮನ ಕೈಯಿಂದ ಒತ್ತಡ ಹೇರಿಸಿ, ಅಪ್ಪನಿಗೆ ಕೇಳಿಸಿದಾಗ
ಖುಷಿಯಿಂದಲೇ ಕಲಿಸಿಕೊಟ್ಟರು, ಪೆಡಲ್ಲು ತುಳಿವಾಗ
ಕ್ಯಾರಿಯರ್ ಹಿಡಿದು ಹಿಂದೆ ಓಡಿದರು

ಮೊದಲು ತಳ್ಳಿಕೊಂಡು ಹೋಗು, ನಂತರ ಒಳ ಪೆಡಲ್ಲು
ಆನಂತರ ಹಾರೆಯ ಮೇಲೆ ಹತ್ತಿ ಓಡಿಸೆಂದರು
ಆಯ ತಪ್ಪಿ ಉದುರಿಬಿದ್ದಾಗ ಓಡಿ ಬಂದೆತ್ತಿದರು
"ಏನೂ ಆಗಿಲ್ಲ, ಧೈರ್ಯವಾಗಿರು ನಾನಿರುವೆ" ಎಂದರು

ಮುಳ್ಳು ಹಿಂಡು, ಕಲ್ಲು ಪಾಗಾರ
ತನ್ನ ಪಾಡಿಗೆ ತಾ ಮೇಯ್ದುಕೊಂಡಿದ್ದ ದನ
ರಸ್ತೆ ಬದಿಯ ಗಟಾರು ಹೀಗೆ ಎಲ್ಲದರ ಮೇಲೂ
ನಾ ಗುದ್ದಿದ ಸೈಕಲ್ಲಿನ ಟೈಯರಿನ ಗುರುತು

ಕಲಿತ ನಂತರ ಮರ್ಕಟ ಮನ ಸಾಹಸವ ಬಯಸಿ
ವಿಚಿತ್ರ ಚಟುವಟಿಕೆಗಳಲಿ ಹಾತೊರೆದು ತೊಡಗಿ
ಓಡಿಸತೊಡಗಿದೆನು ಕೈಬಿಟ್ಟುಕೊಂಡು, ಚಕ್ರ ಎತ್ತಿಕೊಂಡು
ಗೆಳೆಯರ ಕೂರಿಸಿಕೊಂಡು, ಅಬ್ಬಾ ಮಸ್ತಿಗೆ ಎಣೆಯಿಲ್ಲ

ಕಾಲ ಸವೆಯುತ್ತಾ ಬಂದಿತು, ನಾನೂ ಕಲಿತು 
ಉದ್ಯೋಗ ಹಿಡಿದು ದುಡಿಯುತ್ತದ್ದೇನೆ ಅಪ್ಪನಂತೆ
ಸಂಸ್ಥೆಯೇನೋ ಕಾರು ಕೊಟ್ಟಿದೆ ಓಡಾಡಲು
ಆದರೂ ಸೈಕಲ್ಲಿನ ಮಜವಿಲ್ಲ

ಊರಿಗೆ ಹೋದಾಗಲೆಲ್ಲ ನೋಡುತ್ತೇನೆ
ಶೆಡ್ಡಿನಲ್ಲಿ ಬಿದ್ದಿರುವ ಹಳೇ ಸೈಕಲ್ಲು
ನಾ ಗುದ್ದಿ ಗಾಯಗೊಳಿಸಿದ ಸೈಕಲ್ಲು
ಅಪ್ಪ ಅನುದಿನ ಏಳೆಂಟು ಕಿಲೋಮೀಟರ್ ಓಡಿಸಿದ ಸೈಕಲ್ಲು

ಅನ್ನಿಸುತ್ತದೆ ಆಗಾಗ, ಅಪ್ಪ ಎಂತ ಸಾಹಸಿ
ಅದಕ್ಕೇ ಇರಬೇಕು ಅರವತ್ತರಲ್ಲೂ ಅಷ್ಟು ಗಟ್ಟಿ
ಸೈಕಲ್ ಓಡಿಸಿದರೂ ಕುಂದುಕೊರತೆಯಿಲ್ಲದಂತೆ ಸಾಕಿದರು
ಯಾವುದಕ್ಕೂ ಹಿಂಜರಿಯದೇ ಧೈರ್ಯವಾಗಿ ಮುನ್ನಡೆದರು

ಯೋಚಿಸುತ್ತೇನೆ ಆಗಾಗ, ನಾನೂ ಆಗಬಹುದೇ ಅಪ್ಪನಂತೆ?
ಸೈಕಲ್ಲಿನಿಂದ ಬೀಳಲು ಅಪ್ಪನಿಗೆ ಅಂಜಿಕೆಯೇನಿರಲಿಲ್ಲ
ಓಡುವ ಕಾರಿನಿಂದ ಹಾರಲು ನಾ ತಯಾರಿಲ್ಲ
ಅಪ್ಪ ಈಗಲೂ ಹೇಳುತ್ತಾರೆ "ನಾನಿದ್ದೇನೆ ಧೈರ್ಯವಾಗಿರು!"
  
- ಭಾರತೀಯ
ಪ್ರಸನ್ನ.ಆರ್.ಹೆಗಡೆ 
ಭಾನುವಾರ, ಮಾರ್ಚ್ 8, 2015
ಮತ್ಸ್ಯಯಂತ್ರವ ಭೇದಿಸಿ ವರಿಸುವವನಿಗೆ ಕಾದಿದ್ದಳು
ಹಿಡಿದು ಹೂಮಾಲೆಯ ಕೈಯಲ್ಲಿ ಅವಳು
ಕೃಷ್ಣೆ ನಾಮಾಂಕಿತೆ ಆಕೆ, ಕೃಷ್ಣವರ್ಣದ ಸುಂದರಿ
ಕೃಷ್ಣನ ಮಾನಸ ಸೋದರಿ, ಪಾಂಚಾಲ ರಾಜನ ಕುವರಿ

ಯಾವ ಕ್ಷತ್ರಿಯನಿಂದಲೂ ಭೇದಿಸಲಸಾಧ್ಯವಾದಾಗ
ಗುಂಪಿನಿಂದೆದ್ದು ಬಂದನೊಬ್ಬ ವಿಪ್ರಕುವರ
ಕಟ್ಟುಮಸ್ತಾದ ದೇಹ, ಬ್ರಾಹ್ಮಣನಂತಿಲ್ಲ
ಅದೋ ಭೇದಿಸಿಯೇ ಬಿಟ್ಟ, ಹಾಕಲೇಬೇಕು ಕೊರಳಿಗೆ ಹೂಮಾಲೆ
ಗೊತ್ತಾಯಿತು ಅನಂತರ, ಭೇದಿಸಿದವನು ಬೇರಾರೂ ಅಲ್ಲ,
ಮನ್ಮಥರೂಪಿ, ಮಹಾನ್ ಧನುರ್ಧರ ಪಾರ್ಥ
ಅಣ್ಣತಮ್ಮಂದಿರೊಡಗೂಡಿ ನನ್ನನ್ನು ಕರೆದೊಯ್ದ
ತಾಯಿ ಬೇಯಿಸುತ್ತಿದ್ದ ಗುಡಿಸಲಿಗೆ, ಪಾಂಡುಪುತ್ರರಿಗೆಂತ ಗತಿ!
ಅಮ್ಮಾ ನೋಡಿಲ್ಲಿ, ಏನೋ ತಂದಿದ್ದೇನೆ, ಗೆದ್ದು ಬಂದಿದ್ದೇನೆ
ತಿರುಗಿ ನೋಡದೇ ಹೇಳಿ ಬಿಟ್ಟಳು ಕುಂತಿ
ಐವರೂ ಸಮನಾಗಿ ಹಂಚಿಕೊಳ್ಳಿ ಮಕ್ಕಳೇ
ಎಂತಹ ವಿಪರ್ಯಾಸ, ಹೆಣ್ಣಿಗೆ ಹೆಣ್ಣೇ ಶತ್ರು!
ಹಲವು ಗಂಡುಗಳ ಏಕಕಾಲಕ್ಕೆ ವರಿಸುವವಳು ಜಾರಿಣಿ
ಎಂದು ಹೇಳಿತ್ತು ಧರ್ಮಗೃಂಥ ಸಾಮಾನ್ಯರಿಗೆ
ಶಕ್ತಿವಂತನಿಗೆ ಕಾನೂನು ಬದಲಾಯಿಸುವುದು ಕಷ್ಟವೇ?
ಮಹಾನ್ ಪತಿವೃತೆಯಾದ ನಾನು ಐವರು ಗಂಡರ ಮಡದಿ!
ಸಮಾಜ ಅದರ ಬಗ್ಗೆನೂ ತಲೆ ಕೆಡಿಸಿಕೊಳ್ಳಲಿಲ್ಲ
ಸ್ತ್ರೀ ಸ್ವಾತಂತ್ರ್ಯ ನನ್ನ ಕಾಲದಲ್ಲಂತೂ ಇರಲಿಲ್ಲ
ಅದನ್ನು ಸರಿಯಾಗಿ ಬಳಸಿಕೊಂಡವನು ಮಾತ್ರ ಧರ್ಮ
ಜೂಜಿನಲ್ಲಿ ಪಣಕ್ಕಿಟ್ಟ, ಮತ್ತು ಹೆಸರಿಟ್ಟ ರಾಜಧರ್ಮ!
ಪಣಕ್ಕಿಟ್ಟವನು ಸೋತೂಬಿಟ್ಟ!, ಮಟದಿಯನ್ನೇ ಜೂಜಿಗಿಡುವಷ್ಟು
ನೈತಿಕ ಅಧಃಪತನಕ್ಕಿವಯಾಕೆ ಇಳಿದ?
ರಾಜ್ಯಲಕ್ಷ್ಮಿ, ಅಧಿಕಾರಲಕ್ಷ್ಮಿ ತಲೆಗೇರಿರಬೇಕು
ನನ್ನನೊಂದು ಮಾತು ಕೇಳುವ ಔದಾರ್ಯವಿಲ್ಲದವನಾದ
ಅಂತಃಪುರದಲ್ಲಿದ್ದವಳಿಗೆ ಕರೆಬಂತು ಭಟರಿಂದ
ಮಾಜಿ ಮಹಾರಾಣಿ ಬರಬೇಕಂತೆ ಆಸ್ಥಾನಕ್ಕೆ
ಅಶುಭ ಸೂಚನೆಯಾಗಲೇ ದೊರಕಿತ್ತು ನನಗೆ
ಹೆಣ್ಣಿಗೆ ಪ್ರಾಣಕ್ಕಿಂತ ಮಾನ ಹೆಚ್ಚು
ಗೆದ್ದ ದರ್ಪದಲ್ಲಿ ಮುಡಿಹಿಡಿದು ದರದರನೆ
ಪಶುವಂತೆ ಎಳೆದೊಯ್ದ ದುಶ್ಯಾಸನ
ಹರಕೆಗೆ ಬಲಿಯಾಗುವ ಮುಗ್ಧಕುರಿಯಂತೆ ನಾನು
ಸಹಾಯಹಸ್ತಕ್ಕಾಗಿ ಎಲ್ಲ ಗಂಡುಜೀವಗಳನ್ನರಸಿದೆ
ನೀಚ ದುರ್ಯೋಧನನ ಬಾಯಿಂದ ಬಂದೇ ಬಿಟ್ಟಿತು ಆಜ್ಞೆ
ಅನುಜಾ ನಡೆಸು ವಸ್ತ್ರಾಪಹರಣ, ಮಾಡು ಮಾನಭಂಗ
ಭೀಷ್ಮ, ದ್ರೋಣ, ಧೃತರಾಷ್ಟ್ರ, ಐವರು ಗಂಡಂದಿರು
ಒಬ್ಬರೂ ಉಸಿರೆತ್ತುತ್ತಿಲ್ಲ, ಗಂಡಸರೇ ಇವರೆಲ್ಲರು?
ಕಾಡಿದೆ, ಬೇಡಿದೆ, ಸೆರಗು ಹಿಡಿದು ಅಂಗಲಾಚಿದೆ
ವಿದುರನೋರ್ವ ಮುಂದೆ ಬಂದ, ನಿಸ್ಸಹಾಯಕನಾಗಿ ನಡೆದ
ಯಾವ ಕಲ್ಲು ಹೃದಯವೂ ಕರಗಲಿಲ್ಲ
ಸಮಾಜ ಸತ್ತಿದೆ ಮತ್ತು ನನ್ನೆದುರು ಪ್ರೇತವಾಗಿ ನಿಂತಿದೆ
ತುಂಬಿದ ಸಭೆಯಲ್ಲಿ ಅಬಲೆಯ ಮೇಲೆ ದಬ್ಬಾಳಿಕೆ
ಅಧಿಕಾರವಿಲ್ಲದವನೊಬ್ಬ ಸೆರಗಿಡಿದು ಎಳೆಯುತ್ತಿದ್ದಾನೆ
ಜೀವಶಕ್ತಿಯೆಲ್ಲ ಪಣಕ್ಕಿಟ್ಟು ಪ್ರತಿರೋಧಿಸುತ್ತಿದ್ದೇನೆ
ಸಾಲುತ್ತಿಲ್ಲ, ಪರಮಾತ್ಮನೇ ನೀನೆ ಇನ್ನು ದಿಕ್ಕೆನಗೆ
ಎಲ್ಲ ಗಂಡಸರೂ ಷಂಡರಾದಾಗ, ರಕ್ಷಕನೇ ಸ್ವಯಂ ಪುರುಷ
ಹೆಣ್ಣಿನ ಮಾನದ ಘನತೆ ಅರಿತ ಹದಿನಾರು ಸಾವಿರ ಹೆಂಡಿರ ಗಂಡ
ಅವನೊಬ್ಬನಿಲ್ಲದಿದ್ದರೆ ನಡೆದೇ ಬಿಡುತ್ತಿತ್ತು ಹೀನಕೃತ್ಯ
ಮತ್ತದರ ಬಲಿಪಶುವಾಗಿ ನಿಂತಿರುತ್ತಿದ್ದೆ ನಾನು
ಮುಂದೊಂದು ದಿನ ನಾ ಸತ್ತಾಗ ಧರ್ಮ ಹೇಳಿದನಂತೆ
ಕುರುಕ್ಷೇತ್ರ ಯುದ್ಧಕ್ಕಿವಳೇ ಕಾರಣ - ದ್ರೌಪದಿ
ಯಾಕೋ ಇಬ್ಬರ ನಡುವೆ ವ್ಯತ್ಯಾಸವೇ ತಿಳಿಯುತ್ತಿಲ್ಲ
ಸೀರೆ ಸೆಳೆಯುವವನಿಗೂ ಮತ್ತು ನೋಡಿ ಸುಮ್ಮನಿರುವವನಿಗೂ
ಕಾಲ ಕಳೆಯುತ್ತಾ ಬದಲಾಗುತ್ತಾ ಬಂದಿದೆ
ನಾನೂ ಯಾವುದೋ ಹೆಣ್ಣು ಜೀವದ ಚೇತನವಾಗಿದ್ದೇನೆ
ದುಶ್ಯಾಸನ ಇಂದಿಗೂ ಸತ್ತಿಲ್ಲ, ಧರ್ಮ ಏಳಲು ತಯಾರಿಲ್ಲ
ಎಲ್ಲರೂ ಹೇಳುತ್ತಿದ್ದಾರೆ ಕುರುಕ್ಷೇತ್ರಕ್ಕೆ ದ್ರೌಪದಿಯೇ ಕಾರಣ!
-ಭಾರತೀಯ
ಪ್ರಸನ್ನ. ಆರ್. ಹೆಗಡೆ
ಬುಧವಾರ, ಫೆಬ್ರವರಿ 18, 2015
ನೂರು ದನಿಗಳು ಸುತ್ತ ಸೇರಿ 
ಕೇಕೆ ಹಾಕುತ್ತಿವೆ 
ತಾಳಿಕೊ, ಕೇಳಿಸಿಕೊ ನಿನಗೆ ಬೇಕಾದ್ದನ್ನು 
ಕಿತ್ತೊಗೆ ನಿನಗೆ ಬೇಡವಾದದ್ದನ್ನು 
ಉತ್ತೇಜಿಸಿಕೊ ಮನವೇ ನಿನ್ನ ನೀನೆ 
 ನಿನಗೂ ಆಸೆ ಆಕಾಂಕ್ಷೆಗಳಿವೆ 

ಜಾತಿ - ಧರ್ಮ, ಆಚಾರ - ವಿಚಾರ
ಆಸ್ತಿ-ಅಂತಸ್ತು, ಆಹಾರ-ವಿಹಾರ 
ಚರ್ಮದ ಬಣ್ಣ, ಆಡುವ ಭಾಷೆ, ಕುಡಿಯುವ ನೀರು, ಆಳುವ ನಾಡು 
ಕಂದಕಗಳನು ಆಳವಾಗಿ ಇಳಿಸುತ್ತಿವೆ, ಗೋಡೆಗಳನು ಏಳಿಸುತ್ತಿವೆ 
ನಿರ್ಜೀವ ಕಂದಕ, ಗೋಡೆಗಳಿಗೂ ಬೆಳೆಯುವ ಮೋಹ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಕಂದಕಗಳ ಮುಚ್ಚುವುದಿದೆ, ಗೋಡೆಗಳ ಕೆಡಗುವುದಿದೆ 

ಬಂದೂಕು ತೋರಿಸಿ ಹೆದರಿಸುವುದು ಹಳೆಕಾಲ 
ಬಂದೂಕ ಮಾರದೆ ಹೆದರಿಸುವುದು ಈ ಕಾಲ 
ಹೊಟ್ಟೆಗೆ ಹಿಟ್ಟಿಲ್ಲದ ಜೀವಗಳು ನಿನ್ನತ್ತ ನೋಡುತ್ತಿವೆ 
ಸವಾಲಿದೆ ನಿನಗಾಗಿ, ವ್ಯಾಪಾರೀ ಜಗತ್ತಿನಲ್ಲಿ 
ಗಟ್ಟಿಯಾಗಿ ನಿಲ್ಲು ನೀನೆ, ನಿನ್ನ ಹಿತರಕ್ಷಣೆಗೆ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಅವಶ್ಯಕತೆಗಳ ಈಡೇರಿಸುವಷ್ಟು ಈ ಭುವಿಯಲ್ಲಿದೆ 

ಸಿಕ್ಕಿದಷ್ಟೂ ಬೇಕೆನ್ನುವ ಹಪಾಹಪಿ 
ಅಜ್ಞಾನ, ಅಸಹಾಯಕತೆ, ಮುಗ್ಧತೆಗಳ ದುರ್ಗತಿ 
ಮೇಕೆಯಿನ್ನೂ ಬೆಣ್ಣೆ ಒರೆಸಿದ ಬಾಯ ನೆಕ್ಕುತ್ತಲೇ ಇದೆ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಸಮಾನತೆ ಎಂಬ  ಒಂದು ಪದ 
ಶಬ್ದಕೊಶದಲ್ಲಿನ್ನೂ ಉಳಿದಿದೆ 

ಕಾದಿರುವ ಭಗವಂತ ಕೇಳಲು ನಿರ್ಣಯದ ದಿನ 
"ಹೇಳು  ಮಗುವೆ ಏನು ಮಾಡಿ ಬಂದಿರುವೆ ಭುವಿಯೊಳಗೆ?"
ಅತ್ತಿತ್ತ ನೋಡದಿರು ಉತ್ತರವ ನೀಡಲು 
ಮಾಡುವುದಿನ್ನು ಬೇಕಾದಷ್ಟಿದೆ, ಬೆಟ್ಟದಷ್ಟಿದೆ 
ಉತ್ತೇಜಿಸಿಕೊ ಮನವೇ ನಿನ್ನ ನೀನೆ
ಅರಿವೆಂಬ ಸಾಗರದಿ ನಿನ್ನ ನೀ ಹುಡುಕುವುದಿದೆ 

                                    - ಭಾರತೀಯ 
                                ಪ್ರಸನ್ನ. ಆರ್. ಹೆಗಡೆ 
ಗುರುವಾರ, ಆಗಸ್ಟ್ 7, 2014

ಅಳುವ ಕಂದನ ಇಂಪಾದ ದನಿ
ಅಲೆಯಂತೆ ತಾಕುತಿರಲು ಕಿವಿಯ ಮೇಲೆ
ಜನ್ಮ ಜನ್ಮದ ಅನುಬಂಧ ಮೀಟುತಿದೆ ಎದೆಯಲ್ಲಿ
ಬಾ ಮಗುವೆ ಹಾಲುಣಿಸುವೆ ನಿನಗೆ

ನಾನೇ ಹೊತ್ತಿರುವೆ ಹೊಟ್ಟೆಯಲಿ
ನಿನ್ನ ನವಮಾಸ ಸಹಿಸಿ 
ಆದರೆ ನಿನ್ನ ಮೇಲೆ ನನಗ್ಯಾವ ಹಕ್ಕಿಲ್ಲ
ಯಾರದೋ ವೀರ್ಯಾಣು ಅಂಡಾಣುಗಳ ಸಂಯೋಗ ನೀನು
ನೀ ಬೆಳೆವ ವಾತಾವರಣಕೆ ಅವಕಾಶ ನಾನು
ಜಗದ ಕಣ್ಣಿಗೆ ಬಾಡಿಗೆ ತಾಯಿ!!

ಹೆತ್ತಿರಬಹುದು ನಾನು, ಕೂಳಿಗಾಗಿ ಕಾಸಿಗಾಗಿ, 
ಅನುದಿನವೂ ಅನುತರವಾಗಿ
ಕೂಸಿಗಾಗಿ ಹಂಬಲಿಸುತ್ತಿರುವರಿಗಾಗಿ
ಫಲವತ್ತತೆ ಕಳೆದುಕೊಂಡವರಿಗಾಗಿ

ಆದರೆ ಈಗ,
ನಿನ್ನ ನೋಡುತ್ತಿರೆ ಪಾಶ ಸೆಳೆಯುತ್ತಿದೆ
ಮಮತೆ ಮೂಡುತ್ತಿದೆ
ಬಿಡಲಾರೆನೆಂದು ಬಾಯಿಬಿಡಹೋದರೆ
ಜಗತ್ತು ವಚನಭೃಷ್ಟೆಯೆಂಬಂತೆ ನೋಡುತ್ತಿದೆ

ಬಿಟ್ಟುಹೋಗುತ್ತಿರುವೆ ನಿನ್ನ
ಪರಿಸ್ಥಿತಿಯ ಕೈಗೊಂಬೆಯಾಗಿ
ಎಲ್ಲೊ ಅಳುಕು ಮೂಡುತಿದೆ
ಯಶೋದೆ ದೇವಕಿಯಾಗಬಲ್ಲಳೆ?

ನೀ ತೊದಲು ನುಡಿವಾಗ 
"ಅಮ್ಮ" ಎಂದೆನಿಸಿಕೊಳ್ಳುವ ಅವಕಾಶ ಎನಗಿಲ್ಲ
ನಿನ್ನ ಕೈಹಿಡಿದು ನಡೆಸುವ ಯೋಗ ನನಗಿಲ್ಲ
ಎರಡು ಬರಡು ಜೀವಗಳಿಗೆ 
ನಿನ್ನೊಪ್ಪಿಸುತ್ತಿರುವೆನೆಂಬ ಸಂತೃಪ್ತಿ ಮಾತ್ರ ಇದೆ

ಮುಂದೆ ಎಂದಾದರೊಂದು ದಿನ,
ನಿನ್ನ ಜನ್ಮ ಕಾರಣೀಕರ್ತರು
ನಾ ಹೊತ್ತು ಹೆತ್ತಿದ್ದೆನೆಂಬ ವಿಷಯ ತಿಳಿಸಿದರೆ,
"ಆಂಟೀ" ಎಂದು ಕರೆಯಬೇಡ ಕಂದ
ನಾನೂ ನಿನಗೆ ಅಮ್ಮನೇ! 

- ಭಾರತೀಯ
ಪ್ರಸನ್ನ ಆರ್ ಹೆಗಡೆ
ಶನಿವಾರ, ಮೇ 24, 2014

ನನ್ನ ಮೂಕ ಸ್ನೇಹಿತ


ನನ್ನ ಮನೆಗೊಬ್ಬ ಬಂದಿದ್ದ ಅಪರಿಚಿತ
ಆತ ಯಾರೆಂದು ನನಗೂ ಗೊತ್ತಿಲ್ಲ/
ನಾನು ಯಾರೆಂದು ಅವನಿಗೂ ಗೊತ್ತಿಲ್ಲ
ನಾನು ಕುತೂಹಲಿ, ಅವನು ಗಂಭೀರ!//

ಅವನ ಕರೆದುಕೊಂಡು ಬಂದಿದ್ದ ನಮ್ಮ ಮನೆಯ ಆಳು
ನಾನೇ ಕೇಳಿದೆ ಆಳನ್ನು, ಅವನಾರು?/
ಅವ ಹೇಳಿದ ಆತ ಪಕ್ಕದೂರಿನವ
ನಾ ಸಂತೋಷದಿ ಕೇಳಿದೆ ಯಾವೂರಿನವ?//

ನಾನು ಬಹಳಷ್ಟು ಪ್ರಯತ್ನಪಟ್ಟೆ
ಮಾತನಾಡಿಸಲಿಕ್ಕೆ, ಆದರೆ ಆತ ಮಾತನಾಡಲಿಲ್ಲ/
ನಾನು ಪ್ರಯತ್ನಪಟ್ಟು ಸೋತೆ
ನಂತರ ಆತನೇ ಸೂಚಿಸಿದ ತಾನು ಮೂಕನೆಂದು//

ನನಗೆ ಗೊತ್ತಿರಲಿಲ್ಲ ಅವ ಮೂಕನೆಂದು
ಹೇಳಿಕೊಂಡರೂ ಬೇಸರ ಪಡಲಿಲ್ಲ ಅವ/
ಏಕೆಂದರೆ ಅವನಿಗೆ ಆಗ ಹದಿನೆಂಟು
ಮತ್ತು ನನಗೆ ಬರೀ ಎಂಟು//

ನಂತರ ಇನ್ನೊಮ್ಮೆ ನಾನವರ ಊರಿಗೆ ಹೋಗಿದ್ದೆ
ಆದರದಿ ಸ್ವಾಗತಿಸಿದ ಸನ್ನೆಯೊಂದಿಗೆ/
ನಾನು ನಿರೀಕ್ಷಿಸಿರಲಿಲ್ಲ ಆತನ ಹೃದಯ ವೈಶಾಲ್ಯವನ್ನು
ಆಗನ್ನಿಸಿತು ಆ ಮೂಕನೇ ನಿಜವಾದ ಮನುಷ್ಯನೆಂದು!//

ಈಗಲೂ ಆತ ಸಿಗುತ್ತಲೇ ಇರುತ್ತಾನೆ
ನಾ ಆ ಊರಿಗೆ ಹೋದಾಗಲೆಲ್ಲ/
ಆಗೆಲ್ಲಾ ನನಗನಿಸುವುದು ಓ ದೇವರೇ
ಇವನ ಮಾತು ಕಸಿದುಕೊಂಡ ನೀನೆಷ್ಟು ಕಠೋರ!//

ಆತನ ಮನ ಮಗುವಿನಂತೆ ನನ್ನ
ಜೊತೆ ಸಿಕ್ಕಾಗಲೆಲ್ಲಾ ತನಗೆ ತೋಚಿದ/
ವಿಷಯಗಳನ್ನು ತಿಳಿಸುತ್ತಲಿರುತ್ತಾನೆ ಸನ್ನೆಯ ಮೂಲಕ
ಬಾರದ ಮಾತಿನ ಕೊರಗ ಮರೆತು// 

ಮಾತು ಬಾರದೇ ಅವಾಂತರವಾಗುವ ದಿನಗಳಲಿ
ಸನ್ನೆಯ ಮೂಲಕ ಮಾತನಾಡಿಸುವ ಆ ಸ್ನೇಹಿತ/
ನಿಜವಾಗಿಯೂ ನನ್ನ ಪ್ರಾಣಸ್ನೇಹಿತ ನನ್ನ
ಬಿಡುವಿನ ದಿನಗಳಲಿ ನೆನಪಾಗುತ್ತಾನೆ ಸದಾ//

- ಭಾರತೀಯ 
ಪ್ರಸನ್ನ ಆರ್ ಹೆಗಡೆ
ಭಾನುವಾರ, ಫೆಬ್ರವರಿ 16, 2014
                                                                                  ನರ್ತಿಸುತ್ತಿದ್ದಾಳೆ ಕಾಶ್ಮೀರಿ ಬಾಲೆ
               
ಕತ್ತೆತ್ತಿದಷ್ಟೂ ಹಿಮಚ್ಛಾದಿತ ಕಾಡು
ಮೈ ಕೊರೆವ ಛಳಿಯ ಬೀಡು|
ಕಣಿವೆ ಕೊಳ್ಳಗಳ ನಾಡು
ಸುಂದರ ಕಾಶ್ಮೀರವ ನೋಡು||

ನಿಸರ್ಗವೇ ಕಟ್ಟಿಕೊಟ್ಟ ಸ್ವರ್ಗ
ಭೂರಮೆಯ ರತ್ನ ಮುಕುಟ|
ಹಸಿರವಸ್ತ್ರ ಉಟ್ಟ ನಿಸರ್ಗ

                                                                                                      ಕಣ್ ಕೋರೈಸುವಂತೆ ಹಿಮಲೇಪ||

                                                                    ನರ್ತಿಸುತ್ತಿರುವಳು ಕಾಶ್ಮೀರಿ ಬಾಲೆ
ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ|
ನವಭಾವಗಳ ನಮೂದಿಸುತ್ತಾ
ನವರಸಗಳ ನಿವೇದಿಸುತ್ತಾ||

ಚಂದನದ ಮೈಯ ಬೊಂಬೆಯಂತಹ ಬಾಲೆ
ನರ್ತಿಸುತ್ತಿರುವಳು ಗೆಜ್ಜೆಕಟ್ಟಿ|
`ಝಲ್'`ಝಲ್' ನಾದ ಹೊಮ್ಮಿಸುತ್ತಾ
ಶ್ರೋತೃಗಳ ಮನ ತಣಿಸುತ್ತಾ||

ಮೊಳಗುತ್ತಿದೆ ಸನಿಹದಲ್ಲಿ
ಬಂದೂಕಿನ ನಿರಂತರ ಮೊರೆತ|
ಕೊನೆ ಉಸಿರು ಬಿಡುವಾಗೀನ ಚೀತ್ಕಾರ
ರಕ್ತದೋಕುಳಿಯ ಮೇಲೆ ಜೈಕಾರ||
ನಲುಗಿ ನಡುಗುತ್ತಿದೆ ಕಾಶ್ಮೀರ
ವಿದ್ರೋಹಿಗಳ ಕೈಯಲ್ಲಿ ಸಿಲುಕಿ|
`ದಾಲ್' ನೀರಿನಲ್ಲೂ ಲಾಲ್ ವರ್ಣ
ಭಯದ ವಾತಾವರಣ ಕ್ಷಣ ಕ್ಷಣ||
 
ಅನಾಮಿಕ ಆಗಂತುಕ
ಕ್ರೂರ ನೀ ಭಯೋತ್ಪಾದಕ|
ಉತ್ತರಿಸು ನರಹಂತಕ
ಇನ್ನೆಷ್ಟು ದಿನ ಪಾತಕ||

ಉಸಿರಾಡುವ ಗಾಳಿಯಲ್ಲಿಯೂ
ಭಯದ ನೆರಳು ಸೋಕಿಸಿದವನೆ|
ಏತಕೀ ತಣ್ಣನೆಯ ಕ್ರೌರ್ಯ?
ಏತಕೀ ಬಿಡಲಾರದ ಹಗೆತನ?||

ಎಲ್ಲಿದ್ದಾರೆ ಕಾಶ್ಮೀರಿಗಳು?
ನಿಸರ್ಗ ಮಾತೆಯ ಸ್ವಂತನಾಡಿನಲ್ಲೆ?|
ಸುಂದರ ಶಾಲಿನ ಒಳಗಡೆಯೇ? ಅಥವಾ
ಸತ್ಯ ಸಾರುವ ಸಮಾಧಿಗಳೊಳಗೆಯೇ?||

ನುಣುಪು ಮೈಯ ಬಾಲೆ ನರ್ತಿಸುತ್ತಿದ್ದಾಳೆ
ಬಂದೂಕಿನ ತಾಳಕ್ಕೆ ತಕ್ಕಂತೆ|
ಶ್ರೋತೃಗಳೇ ಇಲ್ಲದ ಸಭಾಭವನದಿ

ಯೋಧನಿನ್ನೂ ನಿಂತಿದ್ದಾನೆ ಮೈ ಕೊರೆವ ಛಳಿಯಲ್ಲಿ|।

                                          - ಭಾರತೀಯ 
                                             ಪ್ರಸನ್ನ ಆರ್ ಹೆಗಡೆ 
ಶುಕ್ರವಾರ, ಫೆಬ್ರವರಿ 14, 2014
ಜೊತೆ ಜೊತೆಗೆ ನಡೆಯೋಣ

ಹಿಡಿತದಲ್ಲಿರದ ಕನಸುಗಳು ನಿಜವಾಗಿ
ಉಪ್ಪು,ಹುಳಿ,ಖಾರ ಬಯಸುವ ಇಂದ್ರೀಯಗಳು|
ಅತ್ತಿತ್ತ ಅರಸಿದಾಗ ಅವಳು ಕಂಡಳು
ಮೊಟ್ಟಮೊದಲು ಮನಸಿಗೆ ಹಿಡಿಸಿದಳು||

ಗೆಜ್ಜೆಯ ಸದ್ದು ಮಾಡುತ್ತಾ ಅವಳು
ಹೆಜ್ಜೆಯ ಜೊತೆಜೊತೆಗೆ ಹಾಕುತಿರಲು|
ವಜ್ಜೆಯಾದ ಹೃದಯದಲ್ಲಿ
ಲಜ್ಜೆಯ ಭಾವ ಮೂಡಿತು||

ನಾನೂ ನೋಡಿದ್ದೇನೆ ಹುಡುಗಿಯರ ಬಹಳ
ಆದರೆ ಇಂತಹವಳು ಸಿಗುವುದು ವಿರಳ|
ಇವಳ ಶಬ್ಧಕೋಶದಿ ಇಲ್ಲವೇ ಇಲ್ಲ ಜಗಳ
ಈಕೆ ಮಾತ್ರ ಯಾಕೆ ಇಷ್ಟು ಸರಳ?||

ನಲ್ಮೆಯ ನಲ್ಲೆ ಎದುರಿರಲು
ಒಲುಮೆಯ ಮಾತು ಬರದಾಯಿತು|
ಸುಳಿಯೊಳಗೆ ಸಿಕ್ಕ ಜೀವದಂತೆ
ವಿಲವಿಲನೆ ಒದ್ದಾಡಿತು||

ಪ್ರಿಯೆ,
ರಸಿಕ ಕವಿಯೆಂದು ಜರೆಯಬೇಡ
ಮತ್ತೆ ಮತ್ತೆ ನೋಡಿ ನಗಬೇಡ|
ಹತ್ತಿರ ಬಂದಾಗ ಓಡಬೇಡ
ಮುಗ್ಧಮನವಿದು ಅರಿಯದಿರಬೇಡ||

ಆರದ ದಾಹ, ತೀರದ ಮೋಹ
ಹರೆಯದ ಬಯಕೆಗಳ ಮೆಟ್ಟಿನಿಂತು|
ಪ್ರೌಢತೆಯ ಕಡೆಗೆ ತಿರುಗುವಲ್ಲಿ
ಎಡವಿದ ಮನ ಮತ್ತೆ ಜಾರಿತು||

ನೀ ದೂರವಿದ್ದರೂ ಪರವಾಗಿಲ್ಲ
ಮಾತನಾಡದೇ ಹೋದರೂ ಚಿಂತೆಯಿಲ್ಲ|
ಆಂತರ್ಯದಲ್ಲೊಂದು ಸಣ್ಣ ಸೆಳೆತ
ಕೆಣಕುವುದು ನನ್ನ ನಾಡಿ ಮಿಡಿತ||

ಗೊತ್ತು ಗೆಳತಿ ಒಲವೊಂದೆ ಬದುಕಲ್ಲ
ಸವಾಲುಗಳಿರದ ಜೀವನವಿಲ್ಲ|
ನಂಬಿಕೆಯ ಠೇವಣಿ ನೀ ಜಮೆ ಮಾಡಿದರೆ
ಭದ್ರತೆಯ ಬಡ್ಡಿ ನಾ ನೀಡುವೆ||

ನನ್ನಾಸೆಗಳಿಗೆ ಉತ್ತರವಾಗಿ
ನೀ ಬರಬೇಕೆಂದು ನಾ ಬಯಸುವುದಿಲ್ಲ|
ಸ್ವಾರ್ಥವ ಮೀರಿದ ಪಯಣದುದ್ದಕ್ಕೆ
ಸಹಗಾಮಿನಿಯಾಗಿ ಬರಲಾರೆಯಾ?||

- ಭಾರತೀಯ
ಪ್ರಸನ್ನ. ಆರ್. ಹೆಗಡೆ
ಶನಿವಾರ, ಜೂನ್ 29, 2013
ಮುರಳಿಯ ಮಧುರ ಗಾನಕೆ 
ಮನಸೋತಳಾ ಬಾಲಿಕೆ 
ನಿಂತು ತಾ ದೂರದೆ 
ಕೃಷ್ಣನ ಕಂಡಳೋ ರಾಧೆ 

ಸುತ್ತಲೂ ಗೋಪಿಕಾ ಸ್ತ್ರೀಯರು 
ದೇವನ ಜೊತೆಗೂಡಿರಲು 
ನಿರ್ಮಲ ಭಾವದಿಂದಲೆ  
ಶ್ಯಾಮನ ಸ್ನೇಹಿತೆಯಾದಳೋ  ರಾಧೆ 

ವನದಲ್ಲಿ ಅರಳಿದ ಸ್ನೇಹ 
ಯಮುನೆಯಷ್ಟೇ ಪರಿಶುದ್ಧ 
ಪರಮಾತ್ಮನೂ ಮಗುವಾದ 
ರಾಧೆಯ ಹೃದಯದಿ ಕುಳಿತ 

ಮಥುರೆಯ ಆಗಸದಿ ಕಾರ್ಮೋಡ 
ಸರಿದಿತ್ತು ನಿಧಾನವಾಗಿ 
ಅಟ್ಟಹಾಸದ ಕಂಸ 
ಮಾವನ ಕೊಂದನೋ ಕೃಷ್ಣ 

ದಂಡೆತ್ತಿ ಬಂದ ಜರಾಸಂಧ 
ಮಥುರ ನಗರಿಯ ಒಳಗೆ 
ಹೆದರಿದ ಜನರೆಲ್ಲಾ ಬಂದು 
ಸಾರಿದರು ಕೃಷ್ಣನ ಬಳಿಗೆ 

ಹೊರಟರು ರಾತ್ರೋ ರಾತ್ರಿ 
ಭಗವಂತ ತೋರಿದ ಕಡೆಗೆ 
ದೇವನೊಬ್ಬನೆ ಖಾತ್ರಿ 
ಪಯಣ ಸಾಗಿತ್ತು ದ್ವಾರಕೆಯೆಡೆಗೆ 

ದೂರದಿಂದ ಓಡಿಬಂದಳು 
ಹಿಂದಿನಿಂದಲೇ ಕರೆದಳು 
ದೇವನಿಗೂ ಬೇಡವಾಯಿತೆ 
ರಾಧೆಯೆಂಬ ಬಾಲ್ಯ ಸ್ನೇಹಿತೆ?

ಹಸನ್ಮುಖಿ ಪುರುಷೋತ್ತಮ 
ನಿಂತನು ರಾಧೆಯ ಎದುರು 
ನಗುನಗುತ ನೋವನೆ ನುಂಗಿ 
ಕೈ ಬೀಸಿ ಬೀಳ್ಕೊಟ್ಟಳು ರಾಧೆ 
                               -  ಭಾರತೀಯ 
                                  ಪ್ರಸನ್ನ ಆರ್. ಹೆಗಡೆ 
                          

ಭಾನುವಾರ, ಮಾರ್ಚ್ 10, 2013


ಸೋಮವಾರ, ಜನವರಿ 28, 2013
ಹೊತ್ತಾಯಿತು ಸ್ವಾಮಿ, ಸಮಯ ಹೋಗಿದ್ದೆ ತಿಳಿಯಲಿಲ್ಲ!
ಚಳಿಯಲ್ಲಿ ಬೆಚ್ಚನೆ ಹೊದ್ದು ಮಲಗಿದರೆ
ಕಾಲ ಕಳೆದದ್ದು ಗೊತ್ತಾಗುವುದೇ?
ಗೊತ್ತಾಗಿ ಆಯಿತಲ್ಲ? ಇನ್ನೇನು ಮಾಡುವುದು..
ನಿತ್ಯ ಕರ್ಮಗಳ ಮುಗಿಸಿ,
ಚುರುಗುಡುವ ಹೊಟ್ಟೆಗೊಂದಿಷ್ಟುಹಿಟ್ಟು ತುರುಕಿ
ಕಾಲಿಗೆ ಚಕ್ರ ಕಟ್ಟಿ ಕೊಂಡವರಂತೆ
ದುಡುದುಡನೆ ಓಡುವುದು

ಏದುಸಿರು ಬಿಡುತ್ತ ಅಂತೂ ಇಂತೂ ಗಮ್ಯ ತಲುಪಿ
ಎದುರು ಬಂದವ್ರಿಗೊಮ್ಮೆ ಹಲ್ಲು ತೋರಿಸಿ
ಕುರ್ಚಿಯ ಮೇಲೆ ಕುಳಿತೆವೆಂದರೆ
ಹೊತ್ತು ಹೋಗಿದ್ದೆ ತಿಳಿಯುವುದಿಲ್ಲ
ಕತ್ತಲಾದಮೇಲೆ ಮತ್ತೊಮ್ಮೆ ಮನೆಯ ನೆನಪಾಗಿ
ತೀರದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು
ವ್ಯವಸ್ಥೆಗೆ, ಹಣೆಬರಹಕ್ಕೆ ಬಯ್ದುಕೊಳ್ಳುವುದು

ಶನಿವಾರ ರವಿವಾರ ಬಂತೆಂದರೆ ಸಾಕು
ಯೋಜನೆಗಳ ಸರಮಾಲೆ
ಶುಕ್ರವಾರವೇ ತಯಾರಾಗಿರುವುದು!
ಶಾಪಿಂಗ್, ಡೇಟಿಂಗ್, ವಾಷಿಂಗ್...
ಆದರೆ ಕಡೆಗೆ ಸಫಲವಾಗೋದು ಸ್ಲೀಪಿಂಗ್

ಮತ್ತೆ ಸೋಮವಾರ ಬರಲು ಹೊರಳಿ
ಮುಖವ ಮಾಡುವೆವು ಆಫೀಸಿನತ್ತ ಮರಳಿ
ಅದೇ ಜಾಗ ಅದೇ ಕುರ್ಚಿ,
ಅದೇ ಹವಾನಿಯಂತ್ರಿತ ಕಾರ್ಯಾಲಯ
ಆದರೆ ಒಳಗೆ ಕುಳಿತ
ತಣ್ಣನೆಯ ತಲೆಗಳಲ್ಲಿ ಯೋಚನೆಗಳ ಧಗಧಗ!

ಕತ್ತೆಯಂತೆ ದುಡಿದು, ದಣಿದ ದೇಹ
ದನದಂತೆ ತಿಂದು, ಮೂಲೆಯನರಸಿ
ನಾಯಿಯಂತೆ ಬಿದ್ದುಕೊಳ್ಳುವುದ ನೋಡಿದಾಗ
ಸಾಕಪ್ಪ ಸಾಕು ಎನಿಸಿದರೂ..
ಕಾಂಚಾಣ ಕುಣಿಸುತ್ತಿರುವ ಜಗದಿ
ನಾವು ಇದ್ದೇವೆ ಎಂದು ಕುಣಿದು ತೋರಿಸಲು
ಬೆಳಿಗ್ಗೆ ಬೇಗನೆ ಎದ್ದು ಮತ್ತೆ
ಕೆಲಸಕ್ಕೆ ಹೊರಡಬೇಕು!!

-ಭಾರತಿಯ