Popular Posts

Blog Archive

ಒಟ್ಟು ಪುಟವೀಕ್ಷಣೆಗಳು

Blogger ನಿಂದ ಸಾಮರ್ಥ್ಯಹೊಂದಿದೆ.

ನನ್ನ ಬಗ್ಗೆ

ನನ್ನ ಫೋಟೋ
ಜೀವನವನ್ನು ಎಲ್ಲಾ ದಿಕ್ಕಿನಿಂದ ನೋಡಬಯಸುವ ಒಬ್ಬ ಸರ್ವೇ ಸಾಧಾರಣ ಮನುಷ್ಯ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯದ ಕಡೆಗೆ ಒಲವು ಬೆಳೆಸಿಕೊಂಡ ಆದರೆ ಬದುಕಿಗಾಗಿ ತಂತ್ರಜ್ಞಾನವನ್ನು ಅಭ್ಯಸಿಸಿದ ವ್ಯಕ್ತಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಂದಾವರವೆಂಬ ಪುಟ್ಟ ಗ್ರಾಮ ನನ್ನ ಮೂಲ. ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಮತ್ತು ಹೊಸದಾಗಿ ಬರೆದವುಗಳನ್ನೆಲ್ಲ "ಸಾಹಿತ್ಯ ಚೈತ್ರ" ದಲ್ಲಿ ಪ್ರಕಟಿಸುತ್ತಿರುವ ಹೊಸತಲೆಮಾರಿನ(ಕಡೆ ಪಕ್ಷ ವಯಸ್ಸಿನಲ್ಲಿ) ಕವಿ. ನನ್ನ ಕುರಿತು ಇದಕ್ಕಿಂತ ಹೆಚ್ಚಿನದೇನೂ ಹೇಳಿಕೊಳ್ಳುವಂತದ್ದಿಲ್ಲ... ಹಾಗೇನಾದರೂ ಹೇಳಬೇಕೆಂದು ಕೊಂಡಾಗ ಬ್ಲಾಗಿಗೆ ಬರುತ್ತೇನಲ್ಲಾ?

ಬೆಂಬಲಿಗರು

ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಮೇ 4, 2011
ಮುಸ್ಸಂಜೆ ಮಳೆ

ಮುಸ್ಸಂಜೆ ಮಳೆಯ ಮಾರ್ಧವದಿ
ಮುಗ್ಧ ಮನ ಮಗುವಾಗಿದೆ
ಎಲ್ಲೋ ಬಿದ್ದು ಮುತ್ತಾಗಬೇಕಿದ್ದ ಹನಿ
ನನ್ನ ಮೇಲೆರಗಿ ತಂಪೆರೆದಿದೆ
ನಾಚಿ ಕೆಂಪಾದ ಸೂರ್ಯನೂ ಮಾಯ
ಬರಲಾರದ ಚಂದ್ರನೆದೆಯಲ್ಲೂ ಗಾಯ

ಬಿಸಿಲಲ್ಲಿ ಬಸಿದು ಬೆಂದಿದ್ದ ಭೂಮಿ
ಬರಸೆಳೆದಪ್ಪಿ ತೆರೆದ ಕರಗಳಿಂದ
ನೀಡಲಾಗಿ ಬೆಚ್ಚನೆಯ ಸ್ವಾಗತ 
ಪ್ರಕೃತಿಯಲಿ ನವನವೀನ ಸೃಷ್ಟಿ
ಮನಸೆಳೆವ ಮಣ್ಣ ವಾಸನೆಗೆ
ಬೆರಗಾಯಿತು ಕೀಟ ಪಕ್ಷಿ

ಧೋ ಎಂದು ಅಧೋಮುಖವಾಗಿ
ಸುರಿವ ಮಳೆಯೇ ಮಾಡಲೇನು
ನಾ ನಿನ್ನ ಗುಣಗಾನ?
ಪದಗಳಲಿ ವರ್ಣಿಸಲಾಗದೆ
ಸೋತುಬಸವಳಿವ ನನ್ನ ನೋಡಿ
ನೀ ನಗಬೇಡ ಮನಕೆ ತಂಪ ನೀಡಿ

ತಂಪು ಇಂಪು ಕಂಪುಗಳ ಜನನಿ
ಶ್ರುತಿ, ಸ್ವರ, ಲಯಗಳ ಧಾತ್ರಿ
ಮನುಕುಲವ ಸಹಿಸಿ ಜೀವಜಲ ಸುರಿಸಿ
ಉಸಿರನುಳಿಸಿ ಬೆಳೆಸುವ ಕರುಣಿ 
ಮಿಂಚು ಮಾಯೆಯ ದೇವಸುಂದರಿ
ಸಪ್ತ ವರ್ಣಗಳ ಸುವರ್ಣ ಕಿಂಕರಿ

ಹನಿ ಹನಿಯೆಲ್ಲ ತಾ ಶೇಖರವಾಗಿ 
ಹರಿದರಿದು ನದಿಯಾಗಿ
ನದಿಗಳೆಲ್ಲ ಸಾಗರ ಸೇರಿ
ರತ್ನಾಕರ ತಾನುಕ್ಕಿ ಪೊರೆಯೆ
ಮತ್ತೆ ರವಿಯ ಕಡೆಗೆ ತಿರುಗಿ
ಕಾಲಚಕ್ರ ಘಟಿಸುವುದು ಮರಳಿ

                       - ಭಾರತೀಯ
                         ಪ್ರಸನ್ನ ಆರ್ ಹೆಗಡೆ












0 ಕಾಮೆಂಟ್‌(ಗಳು):